ತುರುಚೆ ದದ್ದು -
ಚರ್ಮದ ಮೇಲೆ ದದ್ದುಗಳು ಎದ್ದು ಸ್ವಲ್ಪಕಾಲದ ಮೇಲೆ ಅವಾಗಿಯೇ ಶಮನವಾಗುವ ಒಂದು ಬೇನೆ. ಗಂಧೆ(ಪಿತ್ಥಗಂಧೆ) ಪರ್ಯಾಯನಾಮ. ತುರುಚೆಯು ದೇಹದ ಯಾವುದೊ ಒಂದು ಭಾಗದಲ್ಲಿ ಇರಬಹುದು ಅಥವಾ ಮೈಯಲ್ಲೆಲ್ಲ ಇರಬಹುದು; ತೀವ್ರಸ್ಥಿತಿಯಾಗಿ (ಅಕ್ಯೂಟ್) ಕಂಡುಬರಬಹುದು; ಇಲ್ಲವೇ ನಿಡುಗಾಲದ್ದಾಗಿರಬಹುದು. ತೀವ್ರವಾದ ತುರುಚೆಗೆ ಸಾಮಾನ್ಯವಾಗಿ ಹೊಟ್ಟೆ ಕರುಳುರಿತ ಕಾರಣವಾಗಿದ್ದು ಅದು ಕೆಲವು ಗಂಟೆಗಳಲ್ಲಿ ಅಥವಾ ದಿವಸಗಳಲ್ಲಿ ಇಳಿದುಹೋಗಬಹುದು. ನಿಡುಗಾಲದ ತುರುಚೆ ಅನೇಕ ತಿಂಗಳು ಪಟ್ಟುಹಿಡಿದು ಇರಬಹುದು. ಈ ಬೇನೆ ಯಾವ ವಯಸ್ಸಿನವರಲ್ಲಿಯೂ ತಲೆದೋರಬಹುದಾದರೂ ತೀರ ಸಣ್ಣ ಮಕ್ಕಳಲ್ಲಿ ಅಪರೂಪ. ರಕ್ತನಾಳಗಳನ್ನು ಹಿಗ್ಗಿಸುವ ವಸ್ತುಗಳು ಚರ್ಮದೊಳಗೊ ಚರ್ಮದ ಅಡಿ ಭಾಗಕ್ಕೊ ಬಿಡುಗಡೆಯಾಗುವುದರಿಂದ ಇಂಥ ದದ್ದುಗಳು ಉದ್ಭವಿಸುತ್ತವೆ. ಬಿಡುಗಡೆಯಾದ ವಸ್ತುಗಳು ಲೋಮನಾಳಗಳ ಗೋಡೆಗಳ ಪಾರಗಮ್ಯತೆಯನ್ನು (ಪರ್ಮಿಯಬಿಲಿಟಿ) ಹೆಚ್ಚಿಸುತ್ತವೆ. ಇದರ ಪರಿಣಾಮವಾಗಿ ಲೋಮನಾಳಗಳಿಂದ ರಕ್ತರಸಿಕೆ (ಸೀರಮ್) ಆಗಾಧ ಪ್ರಮಾಣದಲ್ಲಿ ಹೊರಬೀಳುವುದು. ಇದರಿಂದ ಚರ್ಮ ಉಬ್ಬಿ ತುರುಚೆ ದದ್ದುಗಳು ಆಗುತ್ತವೆ. ಸ್ಥಳೀಯ ಅಪಧಮನಿಯ ಹಿಗ್ಗುವಿಕೆಯಿಂದ ದದ್ದು ಏಳುವುದಕ್ಕೆ ಮುನ್ನ ಆ ಭಾಗ ಊತಗೊಂಡಂತೆ ಕೆಂಪಗೂ ಬಿಸಿಯಾಗಿಯೂ ಇರುತ್ತದೆ. ಅಲ್ಲಿ ಚಲಿಸುತ್ತಿರುವ ರಕ್ತದ ಪ್ರಮಾಣ ಬಹುವಾಗಿ ಹೆಚ್ಚುವುದರಿಂದ ಹೀಗೆ ಆಗುವುದು. ಲೋಮನಾಳಗಳಿಂದ ಲಸಿಕೆ ಅಷ್ಟು ಅಗಾಧ ಪ್ರಮಾಣದಲ್ಲಿ ಒಸರುವುದು ಕೂಡ ಇದೇ ಕಾರಣದಿಂದ. ತುಂಬುಕಣದಿಂದ (ಮಾಸ್ಟ್‍ಸೆಲ್)  ಒಸರುವ ಅಸಿಟೈಲ್ ಕೋಲೀನ್ ಮತ್ತು ಸ್ಥಳೀಯವಾಗಿ ಬಿಡುಗಡೆಯಾದ ಕೈನೀನ್‍ಗಳು ಇಂಥ ದದ್ದುಗಳನ್ನು ತರಬಲ್ಲವು. ಸಾಮಾನ್ಯವಾಗಿ ತುರುಚೆಯ ಉದ್ಭವದಲ್ಲಿ ಈ ವಸ್ತುಗಳಲ್ಲಿ ಕಡೆಯ ಪಕ್ಷ ಎರಡಾದರೂ ಒಟ್ಟಿಗೆ ಭಾಗವಹಿಸುತ್ತವೆ.

ತುರುಚೆ ಒಗ್ಗದಿಕೆಯ ಪ್ರತಿಕ್ರಿಯೆಯಾಗಿರಬಹುದು. ತಿನಿಸುಗಳು, ಮದ್ದುಗಳು, ಪರ ರಕ್ತಲಸಿಕೆ, ನಂಜಿನ ಠಾಣ ಇವು ತುರುಚೆಗೆ ಕಾರಣವಾದಾಗ , ಅದು ಒಗ್ಗದಿಕೆಯಿಂದಲೇ ಆಗುತ್ತದೆ. ಕೆಲವು ಸಮಯದಲ್ಲಿ ಬೇರೆ ಕಾರಣಗಳೂ ಉಂಟು. ಉದಾಹರಣೆಗೆ ಮಾನಸಿಕ ಒತ್ತಡ, ತಂಡಿ, ಶಾಖ, ಬೆಳಕು ಚರ್ಮಕ್ಕೆ ಪೆಟ್ಟು ತಾಕಿದಾಗ ಮತ್ತು ಪ್ರಾಣಿ ಸಸ್ಯಗಳ ಮುಳ್ಳುಗಳು ಚರ್ಮಕ್ಕೆ ಚುಚ್ಚಿದಾಗ ಅಂಥಕಡೆಗಳಲ್ಲಿ ತುರುಚೆ ಏಳುವುದು. ಕೀಟಗಳಿಂದಲೊ ಜಂತುಹುಳುಗಳಿಂದಲೊ ಟ್ರಕಿನಿಯಾಸೀಸ್ ಎಂಬ ಮಾಂಸಖಂಡಗಳಲ್ಲಿ ಸೇರುವ ಜಂತುಹುಳುಗಳಿಂದಲೂ ಮೈಮೇಲೆಲ್ಲ ತುರುಚೆ ಬರುವುದುಂಟು. ದೀರ್ಘಕಾಲಿಕ ತುರುಚೆಗೆ ಅನೇಕರಲ್ಲಿ ಕಾರಣ ಕಂಡುಹಿಡಿಯಲಾಗುವುದಿಲ್ಲ. ಸಾಮಾನ್ಯವಾಗಿ ತಲೆನೋವಿಗೆ ಬಳಸುವ ಆ್ಯಸ್ಪರೀನ್ ಮಾತ್ರೆಗಳು ಮತ್ತು ಇದು ಸೇರಿರುವ ಬೇರೆ ಅನೇಕ ಶಾಮಕ ಮಾತ್ರೆಗಳು ತುರುಚೆಗೆ ಕಾರಣ ಎನ್ನುವುದನ್ನು ಮರೆಯಬಾರದು. ತುರುಚೆ ದದ್ದುಗಳು ದುಂಡಾಕಾರದ ಅಂಡಾಕಾರದ ಇಲ್ಲವೇ ಉದ್ದವಾದ ಆಕಾರದ ಬಿಳಿಯ ಉಬ್ಬುಗಳಾಗಿ ಅವುಗಳ ಸುತ್ತಲೂ ಕೆಂಪು ಅಂಚು ಇರುತ್ತದೆ; ಉರಿ ಮತ್ತು ತುರಿಕೆ ಈಗ ಇರುತ್ತವೆ. ಇವು ಕೆಲವು ಮಿನಿಟುಗಳು ಇಲ್ಲವೆ ಗಂಟೆಗಳು ಇದ್ದು ಯಾವ ಗುರುತೂ ಇಲ್ಲದೆ ಮಾಯವಾಗುತ್ತವೆ. ಮೈಮೇಲೆ ಯಾವ ಭಾಗದಲ್ಲಿಯಾದರೂ ಬರಬಹುದು. ಲೋಳೆಪೊರೆಗಳ ಮೇಲೂ ಬರಬಹುದು. ಮುಖ, ಮೇಲ್ತಲೆ ಮತ್ತು ಅಂಗೈ ಮೇಲೆ ಬರುವುದು ಅಪರೂಪ.

ತುರುಚೆಗೆ ಕಾರಣ ಪತ್ತೆಮಾಡಿ ಚಿಕಿತ್ಸಿಸಬೇಕು. ತೀವ್ರ ತುರುಚೆಗೆ ತಿನಿಸುಗಳೂ ಮದ್ದುಗಳೂ ಕಾರಣ. ಯಾವುದೋ ತಿನಿಸು ತಿಂದ ಇಲ್ಲವೇ ಮದ್ದು ಸೇವಿಸಿದ ಸ್ವಲ್ಪ ಕಾಲದ ಮೇಲೆ ಚಿಹ್ನೆಗಳು ಕಾಣಬಂದರೆ ಕಾರಣ ವೇದ್ಯ. ಇಂಥ ಸನ್ನಿವೇಶದಲ್ಲಿ ಚಿಕಿತ್ಸೆ ಸುಲಭ. ಬೇರೂರಿದ ತುರುಚೆಗೆ ಚಿಕಿತ್ಸೆ ಕ್ಲಿಷ್ಟಕರ. ಈ ತೆರನಾದ ರೋಗಿಗಳ ಎಲ್ಲ ವಿಚಾರಗಳನ್ನೂ ಪರಿಶೀಲಿಸಬೇಕಾಗುತ್ತದೆ. ಅವರ ತಿಂಡಿ ತೀರ್ಥಗಳು, ಸೇವಿಸುವ ಮದ್ದುಗಳು, ಉಸಿರಾಡುವ ವಾಯು ಕೆಲಸ ಮಾಡುವ ಮಾನಸಿಕ ಒತ್ತಡಗಳೇ ಆದಿಯಾಗಿ ಎಲ್ಲ ಅಂಶಗಳನ್ನು ಒರೆಯಿಟ್ಟು ತುರುಚೆಗೆ ಕಾರಣವನ್ನು ಗ್ರಹಿಸಿ ತಕ್ಕ ಕ್ರಮವನ್ನು ಅನುಸರಿಸಬೇಕು, ಅಸಿಟೈಲ್ ಕೋಲಿನ್ನಿನ ನಿರೋಧಕ ಮದ್ದುಗಳು ಇಲ್ಲ. ಕೆಲವು ಹಿಸ್ಟಮೀನ್‍ರೋಧಕ ಮದ್ದುಗಳು ಸ್ವಲ್ಪಮಟ್ಟಿಗೆ ಇಂಥ ಸಾಮಥ್ರ್ಯವನ್ನು ಪಡೆದಿರುತ್ತವೆ. ಹಿಸ್ಟಮೀನ್‍ರೋಧಕ ವಸ್ತುಗಳನ್ನೇ ತುರುಚೆಗೆ ಸಾಮಾನ್ಯವಾಗಿ ಬಳಸಬೇಕು. ಈ ಮದ್ದುಗಳು ತುರುಚೆಯ ಚುರುಕನ್ನು ತಗ್ಗಿಸುತ್ತವೆ, ಇವನ್ನು ಸೇವಿಸುವಾಗ ಎಚ್ಚರಿಕೆ ತಗ್ಗುತ್ತದೆ. ಆದ್ದರಿಂದ ವಾಹನ ಚಾಲಕರು ಇವನ್ನು ಸೇವಿಸುವುದು ಅಪಾಯ. ಅಪಸ್ಮಾರ ರೋಗದವರು ಸೇವಿಸಿದರೆ ರೋಗ ಹೆಚ್ಚುತ್ತದೆಂಬುದನ್ನು ಮರೆಯಬಾರದು.                                    
 									    (ಡಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ